Saturday 15 December 2012

ಜಿಲ್ಲೆಯ ಸಮಗ್ರ ಮಾಹಿತಿಗೆ ಇಲ್ಲೊಂದು ಮುನ್ನುಡಿ

ಬಹಳ ದಿನಗಳ ಕನಸೊಂದನ್ನು ನಿಮ್ಮ ಮುಂದೆ ತೆರೆದಿಡುವ ಬಯಕೆ ನನ್ನದಾಗಿದೆ. ಆ ಕನಸನ್ನು ನಿಮ್ಮ ಮುಂದೆ ತೆರೆದಿಡುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿದ್ದೇನೆ. ಆ ನನ್ನ ಕನಸಿನ ಬೀಜ ಬಿತ್ತಿದ್ದೇನೆ, ಅದೀಗ ಮೊಳಕೆಯೊಡೆದಿದೆ. ಅದಕೀಗ ನಿಮ್ಮ ಸಲಹೆ, ಸಹಕಾರಗಳೇ ನೀರು, ಗೊಬ್ಬರ. ನೀವು ತೋರುವ ಪ್ರೀತಿಯೇ ಅಮೃತಧಾರೆ. ನಿಮ್ಮ ಸಲಹೆ, ಸಹಕಾರ, ಪ್ರೀತಿಯನುಂಡು ಮೊಳಕೆ ಹೆಮ್ಮರವಾಗಿ ಬೆಳೆಯುವ ನಂಬಿಕೆ ನನಗಿದೆ.

ಓಹ್... ಮಹಾನುಭಾವ...! ಪೀಠಿಕೆ ಸಾಕು ಕನಸೆನೆಂದು ಹೇಳು ಎನ್ನುವಿರಾ.... !?
ಮೂಲತಃ ನಾವು ಸಂಘ ಜೀವಿಗಳು, ನಮ್ಮ ನಿತ್ಯದ ನೆಡೆ ನಮ್ಮ ಸುತ್ತ-ಮುತ್ತಲಿನ ಆಗುಹೋಗುಗಳನ್ನೇ ಅವಲಂಬಿಸಿದ್ದು,  ನಮ್ಮ ಸುತ್ತಮುತ್ತಲಿನ ಮಾಹಿತಿಗಳು ಹಲವಾರು ಮಾಧ್ಯಮಗಳ ಮೂಲಕ ಬಿತ್ತರಗೊಳ್ಳುತ್ತಿವೆಯಾದರೂ ಆಧುನಿಕ ತಂತ್ರಜ್ಞಾನದ ಬೆಳವಣಿಗೆಯಿಂದ ನಮ್ಮ ಜೀವನದ ಶೈಲಿ ನಾಗಾಲೋಟದೆಡೆಗೆ ಜಿಗಿದಿದೆ. ಈ ನಿಟ್ಟಿನಲ್ಲಿ ಸಾಗುತ್ತಿರುವ ನಾವು ಸುತ್ತಮುತ್ತಲಿನ ಮಾಹಿತಿಗಳನ್ನು ಅಷ್ಟೇ ವೇಗವಾಗಿ ಚಾಕಚಕ್ಯತೆಯಿಂದ ತಿಳಿದುಕೊಳ್ಳಲು ಕಾತುರರಾಗಿದ್ದೇವೆ. ಈ ದಿಶೆಯಲ್ಲಿ ನಾವುಗಳು ಇಂಟರ್ ನೆಟ್ ಮಾಧ್ಯಮಕ್ಕೆ ಮಾರುಹೋಗುತ್ತಿರುವುದು ಅನಿವಾರ್ಯವೆನಿಸುತ್ತಿದ್ದು, ಇಲ್ಲಿ ನಮ್ಮ ಜೀವನದ ಪ್ರತಿಯೊಂದು ಹೆಜ್ಜೆಯೂ ಅನಾವರಣಗೊಳ್ಳುತ್ತಿದೆ.  ಹೀಗಿದ್ದರೂ ಇಲ್ಲಿ ಕೆಲವು ತೊಡಕುಗಳು ನಮ್ಮನ್ನು ಕಾಡದೇ ಬಿಟ್ಟಿಲ್ಲ. ನಾವು ಹುಡುಕುತ್ತಿರುವ ಮಾಹಿತಿಗಳು ಹರಿದು ಹಂಚಿಹೋಗಿರುತ್ತವೆ. ಅಂತೆಯೇ ನಮ್ಮ ಶಿವಮೊಗ್ಗ ಜಿಲ್ಲೆಯ ಮಾಹಿತಿಯೂ ಕೂಡ. ಹೀಗೆ ನಮಗೆ ಸುಲಭವಾಗಿ ದೊರಕದ ನಿತ್ಯ ಬದುಕಿನ ಅಗತ್ಯ ಮಾಹಿತಿಯನ್ನು ಒಂದೆಡೆ ಕಲೆ ಹಾಕುವ ಪ್ರಯತ್ನ ನಮ್ಮದಾಗಿದೆ. 

ಜಿಲ್ಲೆಯ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ವೈದ್ಯಕೀಯ, ಆರ್ಥಿಕ ಸ್ಥಿತಿಗತಿ, ಹಾಗೂ ಔಧ್ಯಮಿಕ ವಲಯಗಳ ಮಾಹಿತಿಯನ್ನು ಒಂದೆಡೆ  ಕಲೆಹಾಕಿ ಓರಣವಾಗಿ ನಿಮ್ಮ ಮುಂದೆ ತೆರೆದಿಡುವುದರ ಜೊತೆಗೆ ಯುವಪ್ರತಿಭೆಗಳನ್ನು ಜಿಲ್ಲೆಗೆ, ರಾಜ್ಯಕ್ಕೆ... ಪ್ರಪಂಚಕ್ಕೆ ಪರಿಚಯಿಸುವ ದಾರಿಯಲ್ಲಿ ಸಾಗುತ್ತಿದ್ದೇವೆ. ನೀವೂ ಬನ್ನಿ... ನಿಮ್ಮ ಮಾಹಿತಿಯನ್ನು ನೀಡಿ ನಮ್ಮೊಂದಿಗೆ ಕೈಜೋಡಿಸಿ.